ರೇಣುಕಾಚಾರ್ಯ
ವೀರಶೈವ ಸಂಪ್ರದಾಯದ ಪ್ರಕಾರ ವೀರಶೈವ ಪಂಚಾಚಾರ್ಯರಲ್ಲೊಬ್ಬ. ಕೈಲಾಸದ ಪ್ರಮಥರಲ್ಲಿ ಒಬ್ಬ. ಪಾಲ್ಕುರಿಕೆ ಸೋಮನಾಥನ ಗಣಸಹಸ್ರದಲ್ಲಿ ಪ್ರಮಥಗಣರಲ್ಲಿ ಈತನ ಉಲ್ಲೇಖವಿದೆ. ಇವನನ್ನು ಕುರಿತು ಸಂಸ್ಕøತದಲ್ಲಿ ರೇಣುಕಾಗಸ್ತ್ಯ ಎಂಬ ಗ್ರಂಥವಿದೆ. ಇದರಲ್ಲಿ ವೀರಶೈವ ಏಕೋತ್ತರ ಷಟ್‍ಸ್ಥಲಗಳನ್ನು ವಿಸ್ತಾರವಾಗಿ ನಿರೂಪಿಸಲಾಗಿದೆ. ಆಗಮಗಳ ಪ್ರಕಾರ ಈತ ಕೊಲ್ಲಿಪಾಕಿ (ಆಂಧ್ರ ಪ್ರಾಂತ್ಯ)ಯಲ್ಲಿ ಜನಿಸಿದ. ಮಲಯಾಚಲದಲ್ಲಿ ಅಗಸ್ತ್ಯನಿಗೆ ತತ್ತ್ವೋಪದೇಶ ಮಾಡಿದನೆಂಬ ಹೇಳಿಕೆ ಇದೆ. ಅನಂತರ ಲಂಕೆಗೆ ಹೋಗಿ ವಿಭೀಷಣನ ಇಷ್ಟದಂತೆ ಮೂರುಕೋಟಿ ಲಿಂಗಗಳನ್ನು ಸ್ಥಾಪಿಸಿದ. ಇವನ ಹೆಸರಿನಲ್ಲಿ ಪ್ರಸಿದ್ಧವಾಗಿರುವ ಚೋಳರೇಣುಕ ಸಂವಾದ ಗ್ರಂಥ ಸಂಸ್ಕøತದಲ್ಲಿದೆ. ಇದನ್ನು ರೇಣುಕಾಚಾರ್ಯರ ಅವತಾರವೆನಿಸಿದ ರೇವಣಸಿದ್ಧ (12ನೆಯ ಶತಮಾನ) ಕಂಚಿಯ ರಾಜೇಂದ್ರ ಚೋಳನಿಗೆ ಉಪದೇಶಿಸಿದ ಗ್ರಂಥವೆಂಬುದು ವಿಮರ್ಶಕರ ಅಭಿಪ್ರಾಯ. 12ನೆಯ ಶತಮಾನದ ಸಿರಿವಾಳ ಶಾಸನದಲ್ಲಿ ರೇಣುಕಾಚಾರ್ಯ (ಸಿದ್ಧರೇವಣ)ನನ್ನು ಮಹಾನ್ ಸಿದ್ಧಪುರುಷನೆಂದು ಉಲ್ಲೇಖಿಸಲಾಗಿದೆ. ರೇಣುಕಾಚಾರ್ಯನನ್ನು ಪುರಾಣದೊಂದಿಗೆ ಬೆಸೆಯುವುದರಿಂದ ಚಾರಿತ್ರಿಕವಾಗಿ ಇವನ ಬಗ್ಗೆ ಖಚಿತವಾದ ವಿಚಾರಗಳು ಲಭ್ಯವಾಗಿಲ್ಲ. ಅನೇಕ ವೀರಶೈವ ಮಠಗಳಲ್ಲಿ ರೇಣುಕಾಚಾರ್ಯನ ಲಿಂಗೋದ್ಭವಲೀಲೆಯ ಮೂರ್ತಿಪೂಜೆ ನಡೆಯುತ್ತಿದೆ.	

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ